ಗ್ರನ್‍ವಾಲ್ಡ್ ಕದನ -
	ಟ್ಯುಟಾನಿಕ್ ಸೇನೆಗೂ ಪೋಲರಿಗೂ 1410 ರ ಜುಲೈ 15 ರಂದು ನಡೆದ ಕದನ. ಇದು ಸೈಬಾರ್ಕ್ (ಟ್ಯಾನನ್‍ಬರ್ಗ್) ಮತ್ತು ಗ್ರನ್‍ವಾಲ್ಡ್ ಹಳ್ಳಿಗಳ ನಡುವೆ ನಡೆಯಿತಾದ್ದರಿಂದ ಇದಕ್ಕೆ ಗ್ರನ್‍ವಾಲ್ಡ್ ಕದನವೆಂಬ ಹೆಸರು ಬಂದಿದೆ. ಟ್ಯಾನನ್‍ಬರ್ಗ್ ಕದನವೆಂದೂ ಇದನ್ನು ಕರೆಯುವುದುಂಟು. ಈ ಕದನದಿಂದಾಗಿ ಬಾಲ್ಟಿಕ್ ಸಮುದ್ರದ ಆಗ್ನೇಯ ಕರಾವಳಿಯಲ್ಲಿ ಜರ್ಮನರ್ ವಸಾಹತು ಕೊನೆಗೊಂಡಿತು. 

	1385 ರಲ್ಲೇ, ಪೋಲೆಂಡ್ ಮತ್ತು ಲಿಥೂವೇನಿಯ ಒಂದಾದಾಗ ಪೋಲೆಂಡಿನ ಶಕ್ತಿ ಹೆಚ್ಚಿತ್ತು. ಇದು ಆದ್ದು 2 ನೆಯ ವ್ಲಾಡಿಸ್ಲಾಫನಿಂದ. ಈತ 1386 ರಿಂದ 1434 ರ ವರೆಗೆ ಪೋಲೆಂಡ್‍ನ ದೊರೆಯಾಗಿದ್ದ. ಟ್ಯುಟಾನಿಕ್ ಪಂಥದ ಕೇಂದ್ರ ಇದ್ದದ್ದು ವ್ಯಾಲ್ಬಾರ್ಕ್‍ನಲ್ಲಿ. ಅದರ ಮೇಲೆ ಏರಿ ಹೋಗಲು ವ್ಲಾಡಿಸ್ಲಾಫ್ ತನ್ನ ಸೇನೆಯನ್ನು ಶತ್ರುಗಳು ನಿರೀಕ್ಷಿಸಿದ್ದಕ್ಕಿಂತ ದೂರದಲ್ಲಿ ನಿಲ್ಲಿಸಿದ. ಅಲ್ರಿಚ್ ಫಾನ್ ಜಂಗಿಂಜೆನನ ನಾಯಕತ್ವದಲ್ಲಿ ಪಂಥದ ಶಸ್ತ್ರ ಸಜ್ಜಿತ ರಾವುತದಳ ಮುಂದೆ ನುಗ್ಗಿ, ವೈಟಾಟಸನ ಲಿಥೂವೇನಿಯನ್ ಸೇನೆಯನ್ನು ಸೋಲಿಸಿತು. ಆದರೆ ವ್ಲಾಡಿಸ್ಲಾಫ್ ನಿರ್ದೇಶಿಸುತ್ತಿದ್ದ ಪೋಲೀಸ್ ಸೇನೆ ಸುರಕ್ಷಿತವಾಗಿತ್ತು. ಅದು ಜಂಗಿಂಜೆನನ ಸೇನೆಯ ಮೇಲೆ ಬಿತ್ತು. ಜಂಗಿಂಜೆನ್ ಸಾವಿಗೆ ಈಡಾದ. ಅವನ ವೀರರ ಪೈಕಿ 205 ಮಂದಿ ಸತ್ತರು. ಉಳಿದವರು ದಿಕ್ಕಾಪಾಲಾಗಿ ಓಡಿ ಹೋದರು. 

	ಈ ಕದನದಿಂದಾಗಿ ಟ್ಯುಟಾನಿಕ್ ಪಂಥದ ನೈತಿಕ ಸ್ಥೈರ್ಯ ನಷ್ಟವಾಯಿತು. ಅನೇಕ ಕೋಟೆಗಳು ಶರಣಾದುವು. ಆದರೆ ಆಗಸ್ಟ್ -ಸಪ್ಟೆಂಬರ್ ತಿಂಗಳುಗಳಲ್ಲಿ ಹೆನ್ರಿಕ್ ರ್ಯೂಸ್‍ವಾನ್ ಫ್ಲೂನ್ ಎಂಬುವನು ಮ್ಯಾಲ್‍ಬ್ರಾಕಿನ ರಕ್ಷಣೆಯ ನೇತೃತ್ವ ವಹಿಸಿದ್ದ. ಸ್ವಲ್ಪ ಕಾಲ ಪೋಲೀಸರ ಕೈಕಟ್ಟಿದಂತಾಗಿತ್ತು. ಆದರೂ ಟ್ಯುಟಾನಿಕ್ ಪಂಥೀಯರು ಮತ್ತೆ ತಮ್ಮ ಪ್ರತಿಷ್ಠೆ ಬೆಳೆಸಿಕೊಳ್ಳಲಾಗಲಿಲ್ಲ. ಮೊದಲಿನ ಒಗ್ಗಟ್ಟೂ ಇರಲಿಲ್ಲ. ಬಾಲ್ಟಿಕ್ ಪ್ರದೇಶದ ಮೇಲೆ 1466 ರಲ್ಲಿ ಟ್ಯುಟಾನಿಕ್ ಪಂಥೀಯರ್ ಹತೋಟಿ ಸಂಪೂರ್ಣವಾಗಿ ಕುಸಿಯಿತು.
(ಎಂ.ಆರ್.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ